ನೀಲಿ ತುರಾಯಿ ಮರ
ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಅಲಂಕಾರ ವೃಕ್ಷ. ಜಕರಾಂಡ ಮಿಮೋಸಿಫೋಲಿಯ ಶಾಸ್ತ್ರೀಯನಾಮ. ಇದರ ತವರು ಬ್ರೆಜಿಲ್. ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುವುದಿದೆ. ಜೌಗಿಲ್ಲದ ಫಲವತ್ತಾದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ಬೇಸಗೆ ಪ್ರಾರಂಭದಲ್ಲಿ ಹೂ ಬಿಡುತ್ತದೆ.

	ಇದು 10-15 ಮೀ. ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಎಲೆಗಳು ದ್ವಿಪಿಚ್ಛಕ ಸಂಯುಕ್ತ ಮಾದರಿಯವು. ಹೂ ಬಿಡುವುದಕ್ಕೆ ಮೊದಲೇ ಎಲೆಗಳು ಉದುರಿಹೋಗುವುದು ಇದರ ವಿಶೇಷ ಲಕ್ಷಣ. ಹೂಗಳು ರೆಸೀಮ್ ಗೊಂಚಲುಗಳಲ್ಲಿ ಅರಳುವುವು. ಪ್ರತಿಗೊಂಚಲಿನಲ್ಲಿ 80ರಿಂದ 90 ಹೂಗಳು ಇರುವುವು. ಹೂಗಳಿಗೆ ವಾಸನೆ ಇಲ್ಲ. ಹೂ ಬಿಟ್ಟಾಗ ನೀಲಿ ಚಪ್ಪರ ಹಾಕಿದ ಹಾಗೆ ತುಂಬ ಸುಂದರವಾಗಿ ಕಾಣುತ್ತದೆ.

	ನೀಲಿ ತುರಾಯಿಮರ ಸಾಲು ಮರವಾಗಿ ಬೆಳೆಸಲು ಉತ್ಕøಷ್ಟವಾದದ್ದು.

	ಇದನ್ನು ಬೀಜ, ಕಣ್ಣುಹಾಕುವುದು (ಬಡ್ ಗ್ರಾಫ್ಟಿಂಗ್) ಮತ್ತು ಕಾಂಡ ತುಂಡುಗಳಿಂದ ವೃದ್ಧಿಮಾಡಬಹುದು. ಇದಕ್ಕೆ ಶೀಘ್ರವಾಗಿ ಬೆಳೆಯುವ ಗುಣವಿದೆಯಾದರೂ ಇದರ ಆಯಸ್ಸು ಕಡಿಮೆ. ನೆಟ್ಟ ಐದು ವರ್ಷಗಳ ಅನಂತರ ಹೂ ಬಿಡುವುದಕ್ಕೆ ಪ್ರಾರಂಭಿಸಿ ಇಪ್ಪತ್ತು ವರ್ಷಗಳಿಗೆ ಕುರೂಪಿಯಾದ ಮರವಾಗುತ್ತದೆ.

	ನೀಲಿ ತುರಾಯಿ ಮರಕ್ಕೆ ಇತರ ಬಳಕೆಗಳೂ ಉಂಟು. ಇದರ ಎಲೆಗಳನ್ನು ಎದೆಗೆ ಸಂಬಂಧಪಟ್ಟ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಗಾಯಗಳಿಗೆ ಹಚ್ಚಲು ಬಳಸುವುದುಂಟು.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ